ರಾಣಿಕೋಟ್ ಶಿಲಾಶ್ರೇಣಿ -
ಸಿಂಧ್ ಮತ್ತು ಬಲೂಚಿಸ್ತಾನ ಪ್ರದೇಶಗಳ ಜಲಜಶಿಲಾ ಸಮುದಾಯ.  ಭಾರತದ ತೃತೀಯ ಜೀವಿಕಲ್ಪದ ಪ್ರರೂಪ ಪ್ರದೇಶ.  ಈ ಶಿಲಾಶ್ರೇಣಿ ಮೇಲಣ ಕ್ರಿಟೇಷಸ್ ಯುಗಕ್ಕೆ ಸೇರಿದ ಪಬ್ ಮರಳುಶಿಲೆಗಳ ಮೇಲೆ ವ್ಯವಸ್ಥಿತವಾಗಿದೆ.  ಈ ಶಿಲೆಗಳ ವಯಸ್ಸನ್ನು ಕೆಳಗಣ ಮತ್ತು ಮೇಲಣ ಪೇಲಿಯೋಸೀನ್ ಅವಧಿ ಎಂದು ನಿರ್ಧರಿಸಲಾಗಿದೆ.  ಈ ಶಿಲಾಶ್ರೇಣಿ ಕೆಳಗಣ ಮತ್ತು ಮೇಲಣ ರಾಣಿಕೋಟ್ ಶಿಲೆಗಳು ಎಂಬ ಎರಡು ವಿಭಾಗಗಳನ್ನು ಹೊಂದಿವೆ.  ಜಿಪ್ಸಮ್‍ಯುಕ್ತ ಜೇಡುಶಿಲೆ ಮತ್ತು ಲಿಗ್ನೈಟ್ ಹಾಗೂ ಕಲ್ಲಿದ್ದಲುಯುಕ್ತ ಮರಳುಶಿಲೆಗಳು ಕೆಳಗಣ ರಾಣಿಕೋಟ್ ವಿಭಾಗದಲ್ಲಿ ಕಾಣಸಿಗುತ್ತವೆ.  ಈ ಶ್ರೇಣಿಯ ದಪ್ಪ ಸು.  300 ರಿಂದ 450 ಮೀ.  ಈ ಮರಳುಶಿಲೆಗಳ ಮೇಲೆ, ಮೇಲಣ ರಾಣಿಕೋಟ್ ಶ್ರೇಣಿಗೆ ಸೇರಿದ ಊದಾ ಇಲ್ಲವೆ ಕಂದುಬಣ್ಣದ ಸುಣ್ಣ ಮತ್ತು ಜೇಡುಶಿಲೆಗಳಿವೆ.  ನಮ್ಮುಲೈಟಿಸ್ ಎಂಬ ಫೊರಾಮಿನಿಫೆರ ಜೀವ್ಯವಶೇಷಗಳನ್ನು ಹೊಂದಿರುವ ಈ ಶಿಲೆಗಳು ಮೇಲಣ ಪೇಲಿಯೋಸೀನ್ ಅವಧಿಯವು.

ಈ ಶ್ರೇಣಿಗೆ ಸಮಕಾಲೀನವಾದ ಮತ್ತೊಂದು ಶಿಲಾಸಮೂಹ ಪಂಜಾಬಿನ ಸಾಲ್ಟ್‍ರೇಂಜ್ ಬೆಟ್ಟಗಳಲ್ಲಿದೆ.  ಈ ಸಮೂಹದ ಶಿಲೆಗಳು 250 ಮೀ ದಪ್ಪನಾಗಿದ್ದು ಢಾಕ್‍ಪಾಸ್ ಸ್ತರಗಳು, ಖೈರಾಬಾದ್ ಸುಣ್ಣಶಿಲೆ ಹಾಗೂ ಪಟಾಲ ಜೇಡುಶಿಲೆಗಳು ಎಂಬ ಮೂರು ಶಿಲಾವರ್ಗಗಳನ್ನೂ ಹೊಂದಿವೆ.	
		*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ